ಸಿರಾಕ್ಯೂಸ್
	ಪುರಾತನ ಸಿಸಿಲಿ ದೇಶದ ಪ್ರಮುಖ ಗ್ರೀಕ್ ನಗರ. ಕ್ರಿ.ಪೂ.5ನೆಯ ಶತಮಾನದ ತನಕದ ಇದರ ಇತಿಹಾಸದ ಬಗ್ಗೆ ಹೆಚ್ಚಿಗೆ ತಿಳಿದುಬಂದಿಲ್ಲ. ಕಾರಿಂತ್‍ನ ಗ್ರೀಕರು ಈ ನಗರವನ್ನು ಕ್ರಿ.ಪೂ.ಸು.734ರಲ್ಲಿ ಸ್ಥಾಪಿಸಿದಂತೆ ತಿಳಿದುಬರುತ್ತದೆ. ಕ್ರಿ.ಪೂ. 498-449ರ ತನಕ ಗೇಲಾದ ನಿರಂಕುಶಪ್ರಭು ಆಗಿದ್ದ ಹಿಪೊಕ್ರೇಟಿಸನ ಕಾಲದಲ್ಲಿ ಈ ನಗರದ ಸ್ವಾತಂತ್ರ್ಯಕ್ಕೆ ಧಕ್ಕೆ ಬಂತು. ಕ್ರಿ.ಪೂ.485ರಲ್ಲಿ ಸಿರಾಕ್ಯೂಸನ್ನು ಆಕ್ರಮಿಸಿದ ಗೆಲೋ ತನ್ನ ಸೈನಿಕರಿಗೂ ಗ್ರೀಸ್ ದೇಶದಿಂದ ವಲಸೆ ಬಂದಿದ್ದ ಇತರರಿಗೂ ಪೌರಹಕ್ಕುಗಳನ್ನು ನೀಡಿದ್ದರಿಂದ ಈ ನಗರದ ಜನಸಂಖ್ಯೆ ಹಲವಾರು ಜನಾಂಗಗಳನ್ನೊಳಗೊಂಡಿತು. ಗೆಲೋವಿನ ಸೋದರನಾದ ಒಂದನೆಯ ಹೀರೊ ಈ ನಗರದ ಕವಿಗಳಿಗೂ ವೇದಾಂತಿಗಳಿಗೂ ತಕ್ಕಷ್ಟು ಉತ್ತೇಜನ ನೀಡಿದ. ಕ್ರಿ.ಪೂ. 415-13ರಲ್ಲಿ ಅಥೆನ್ಸ್ ನಗರದವರು ಇದನ್ನು ಮುತ್ತಿದಾಗ ಸಿರಾಕ್ಯೂಸ್‍ನವರು ಅವರ ವಿರುದ್ಧ ಹೋರಾಡಿ ಜಯಗಳಿಸಿದರು. ಸಿಸಿಲಿಯ ಅಧಿಕಾರ ಹೊಂದಿದ್ದ ಒಂದನೆಯ ಡೈಯೊನಿಸಿಯಸ್‍ನ (ಕ್ರಿ.ಪೂ.406-367) ಆಡಳಿತದಲ್ಲಿ ಈ ನಗರದ ಜನಸಂಖ್ಯೆ ಹೆಚ್ಚಿತ್ತು; ಸೌಂದರ್ಯ ಹಿರಿಮೆಗಳು ಉತ್ತಮಗೊಂಡವು. ಅನಂತರ ಕ್ರಿ.ಪೂ.ಸು.345ರಲ್ಲಿ ಕಾರ್ಥೆಜ್‍ನವರಿಂದ ಸಿರಾಕ್ಯೂಸ್‍ಗೆ ತೊಂದರೆಯುಂಟಾದಾಗ ಸೇನಾಧಿಪತಿ ಟಿಮೊಲಿಯನ್ ಈ ನಗರದ ರಕ್ಷಣೆ ಮಾಡಿದ. ಅವನ ಮರಣದ ಬಳಿಕ ನಡೆದ ಕ್ರಾಂತಿಯೊಂದರ ಫಲವಾಗಿ ನಗರ 600 ಜನ ಪ್ರಮುಖ ನಾಗರಿಕರ ಮಿತಜನಾಧಿಪತ್ಯಕ್ಕೆ ಒಳಪಟ್ಟಿತು. ಕ್ರಿ.ಪೂ.200ರಲ್ಲಿ ಅಧಿಕಾರಕ್ಕೆ ಬಂದ ಎರಡನೆಯ ಹೀರೊನ ಅಧಿಕಾರಾವಧಿಯಲ್ಲಿ ಈ ನಗರ ಶಾಂತಿ, ಸಮೃದ್ಧಿಗಳನ್ನು ಕಂಡಿತು. ಅನಂತರ ಇದು ಕಾರ್ಥೆಜ್‍ನವರ ವಶವಾಗಿ ಕೆಲಕಾಲವಿತ್ತು. ಕ್ರಿ.ಪೂ.211ರಲ್ಲಿ ರೋಮನ್ನರು ಈ ನಗರವನ್ನು ವಶಪಡಿಸಿಕೊಂಡರು. ಅನಂತರ ಇದು ಸಿಸಿಲಿಯ ರೋಮನ್ ಸಾಮ್ರಾಜ್ಯದ ರಾಜಧಾನಿಯಾಯಿತು. 878ರಲ್ಲಿ ಸ್ಯಾರಸೆನರು (ಅರಬರು) ಈ ನಗರವನ್ನು ನಾಶಪಡಿಸಿದರು. ಈ ಪ್ರಾಚೀನ ನಗರದ ನಿವೇಶನದಲ್ಲಿ ಈಗ ಸಿರಾಕುಸ  ಎಂಬ ಆಧುನಿಕ ನಗರ ನಿರ್ಮಾಣಗೊಂಡಿದೆ.						
(ಜಿ.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ